ಸುದ್ದಿ ಜಗತ್ತು

ರಾಹುಲ್ ಗಾಂಧಿ ಮೇಲೆ ಅಮಿತ್ ಶಾ ಸರ್ಜಿಕಲ್ ಸ್ಟ್ರೈಕ್! ಬೆಚ್ಚಿ ಬಿದ್ದ ಕಾಂಗ್ರೆಸ್!

2014ರಲ್ಲಿ ಅಪೂರ್ಣಗೊಂಡಿದ್ದ ಕೆಲಸವೊಂದನ್ನು ಪೂರ್ತಿಗೊಳಿಸಲು ಅಮಿತ್ ಶಾ ಟೀಂ ರೆಡಿಯಾಗಿದೆ. ಗೆದ್ದ ಮೇಲೆ ತಮ್ಮ ಕ್ಷೇತ್ರದತ್ತ ತಲೆಯೂ ಹಾಕಿ ಮಲಗದಿದ್ದ, ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕಳೆದ ಬಾರಿ ಕೊಂಚ ಯಾಮಾರಿದ್ರೂ ಅಮೇಥಿಯಿಂದ ಗಂಟುಮೂಟೆ ಕಟ್ಟಬೇಕಾಗಿ ಬರುತ್ತಿತ್ತು. ಅದೃಷ್ಟ ಗಟ್ಟಿ ಇತ್ತು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದ ಎರಡೇ ಎರಡು ಸೀಟುಗಳು ಅಮ್ಮ-ಮಗನ ಪಾಲಾಗಿದ್ದವು. 2019ರ ಚುನಾವಣೆಯಲ್ಲಿ ಅದರಲ್ಲೂ ಒಂದು ಸೀಟು ಕಸಿದುಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ಅದರ ಟಾರ್ಗೆಟ್ – ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ. ಯುವರಾಜನಿಗೆ ತವರಿನಲ್ಲೇ ಸೋಲಿನ ರುಚಿ ತೋರಿಸಲು ಅಮಿತ್ ಶಾ ರೆಡಿಯಾಗಿದ್ದಾರೆ. ಅದಕ್ಕೆ ಅವರ ಸೇನಾನಿ ಸ್ಮತಿ ಇರಾನಿ ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ. ಅಮೇಥಿ ಗೆಲ್ಲಲೆಂದೇ ಬಿಜೆಪಿ 3 ಅಸ್ತ್ರಗಳನ್ನು ಪ್ರಯೋಗಿಸತೊಡಗಿದೆ. ಪರಿಣಾಮ, ಕಳೆದೊಂದು ವಾರದಿಂದ ಅಮೇಥಿಯಲ್ಲಿ ಭಾರೀ ರಾಜಕೀಯ ತಲ್ಲಣಗಳು ಸೃಷ್ಟಿಯಾಗತೊಡಗಿವೆ.

ಆಪರೇಷನ್ ಕಮಲ
ಕಳೆದ ಬಾರಿ ಬಿಜೆಪಿ-ಅಪ್ನಾದಳ್ ಮೈತ್ರಿಕೂಟ ಗೆಲ್ಲಲು ಸಾಧ್ಯವಾಗದೇ ಇದ್ದದ್ದು ಬರೀ 7 ಸೀಟುಗಳು. 2 ಕಾಂಗ್ರೆಸ್ ಮತ್ತೆ ಐದು ಮುಲಾಯಂ ಕುಟುಂಬದ್ದು. ಈ ಬಾರಿ ಈ ಕ್ಷೇತ್ರಗಳಿಗೆ ಬಿಜೆಪಿ ಸ್ಪೆಷಲ್ ಅಟೆನ್ಷನ್ ನೀಡ್ತಿದೆ. ಇದರ ಸುಳಿವರಿತ ರಾಹುಲ್ ಗಾಂಧಿ ಅಕ್ಟೋಬರ್ 5 ರಂದು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಕೆಲವೊಂದಿಷ್ಟು ಕೆಲಸಗಳಿಗೆ ಮುತುವರ್ಜಿ ತೋರಿಸಿದ್ದರು. ಅಮೇಥಿಗೆ ಭೇಟಿ ನೀಡಿ ಬಂದ ಬಳಿಕ ಕೆಲ ತಿಂಗಳು ನೆಮ್ಮದಿಯಾಗಿರಬಹುದು ಎಂದುಕೊಂಡಿದ್ದ ರಾಹುಲ್ ನಿದ್ದೆ, ವಾರ ಕಳೆಯೋದ್ರೊಳಗೆ ಹಾರಿ ಹೋಗಿದೆ. ಸೋಮವಾರ ರಾತ್ರಿ ನಡೆದ ಬೆಳವಣಿಗೆಗಳಲ್ಲಿ, ಹಸ್ತಪಡೆ ಛಿದ್ರಗೊಂಡಿದೆ. ಮಿಡ್ನೈಟ್ ಆಪರೇಷನ್ ಲೋಟಸ್ಗೆ ಕಾಂಗ್ರೆಸ್ ಪತರಗುಟ್ಟಿದೆ. ಅಮೇಥಿಯ 60ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಸ್ಮತಿ ಇರಾನಿ ಸಮ್ಮಖದಲ್ಲಿ ಬಿಜೆಪಿ ಸೇರಿದ್ದಾರೆ.

ಮುಖ್ಯವಾಗಿ ಅಮೇಥಿ ಲೋಕಸಭಾ ಕ್ಷೇತ್ರದ ಗೌರಿಗಂಜ್ನ ಮಾಜಿ ಶಾಸಕ ಜಂಗ್ ಬಹದ್ದುರ್ ಸಿಂಗ್, ಸೋಮವಾರ ರಾತ್ರಿ ಬಿಜೆಪಿ ಸೇರಿದ್ದಾರೆ. ಅಮೇಥಿಯ 80 ಬೂತ್ಗಳಲ್ಲಿ ಪ್ರಭಾವ ಹೊಂದಿದ್ದು, 30 ಸಾವಿರ ಮತಗಳನ್ನು ಬಿಜೆಪಿ ಬುಟ್ಟಿಗೆ ಹಾಕಿಸುವ ಸಾಮರ್ಥ್ಯ ಇವರಿಗೆ. 3.9 ಲಕ್ಷ ವೋಟುಗಳಿಂದ 2009ರಲ್ಲಿ ಗೆದ್ದಿದ್ದ ರಾಹುಲ್ ಗೆಲುವಿನ ಅಂತರ 2014ರ ಚುನಾವಣೆಯಲ್ಲಿ ಒಂದುಲಕ್ಷದ ಆಸುಪಾಸಿಗೆ ಇಳಿದಿತ್ತು. ಸ್ಮತಿ ಇರಾನಿ ರಾಹುಲ್ ಗೆ ಸಾಕಷ್ಟು ನೀರು ಕುಡಿಸಿದ್ದರು. ಒಂದು ವೇಳೆ ಪ್ರಿಯಾಂಕಾ ಗಾಂಧಿ ಸಹೋದರನ ಪರ ಪ್ರಚಾರಕ್ಕೆ ಇಳಿಯದೇ ಹೋಗಿದ್ದಲ್ಲಿ ರಾಹುಲ್ ಸೋಲಿನ ಭೀತಿ ಕಾಡುತ್ತಿತ್ತು. ಅದಾದ ಬಳಿಕ ಅಮೇಥಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ಮತಿ ಇರಾನಿ, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಕ್ಷೇತ್ರದಲ್ಲೇ ಓಡಾಡತೊಡಗಿದ್ದಾರೆ. ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಅಮೇಥಿಯ ಎಲ್ಲಾ ಕ್ಷೇತ್ರಗಳನ್ನು ಕಳೆದುಕೊಂಡಿದ್ದೂ ಆಗಿದೆ. ಇದೀಗ 30 ಸಾವಿರ ಮತಗಳು ಬಿಜೆಪಿಯತ್ತ ಪಲ್ಲಟಗೊಂಡರೆ, ಮುಂದಿನ ಬಾರಿ ರಾಹುಲ್ ಸ್ಥಿತಿ ಮತ್ತಷ್ಟು ಕಠಿಣವಾಗಲಿದೆ. ಉಳಿದ 60 ಮುಖಂಡರ ಸಾಮರ್ಥ್ಯ ಏನು ಎನ್ನುವುದೂ ಕಾಂಗ್ರೆಸ್ಗೆ ತಿಳಿಯದ್ದೇನಲ್ಲ. ಈ ಪೈಕಿ ಎರಡು ಡಜನ್ ಮುಸ್ಲಿಂ ಗ್ರಾಮಪ್ರಧಾನರು ಇರುವುದು ಕಾಂಗ್ರೆಸ್ ಚಿಂತೆಯ ವಿಚಾರವೇ. ರಾಹುಲ್ ಭೇಟಿ ತೆರಳಿದ ಬೆನ್ನಲ್ಲೇ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಮೂಲಸೌಕರ್ಯ ವೃದ್ಧಿ
ರಾಹುಲ್ ಗಾಂಧಿ ಅಮೇಥಿಯನ್ನು ನಾಲ್ಕು ಬಾರಿ ಪ್ರತಿನಿಧಿಸುತ್ತಿದ್ದಾರೆ. ಆದರೆ, ಅಭಿವೃದ್ಧಿ ಎನ್ನುವುದು ಅಲ್ಲಿನ ಜನರಿಗೆ ಇನ್ನೂ ಮರೀಚಿಕೆ. ಗಾಂಧಿ ಕುಟುಂಬದ ಮೇಲಿನ ವಿಶ್ವಾಸ, ಪ್ರೀತಿಯ ಏಕೈಕ ಕಾರಣಕ್ಕೆ ರಾಹುಲ್ ಗೆಲ್ಲುತ್ತಾ ಬಂದಿದ್ದಾರೆ. ಪರಂಪರಾಗತವಾಗಿ, ಅಮೇಥಿ ಕ್ಷೇತ್ರ ಗಾಂಧಿ ಕುಟುಂಬದ ಭದ್ರಕೋಟೆಯೆಂದೇ ಬಿಂಬಿತವಾಗಿದೆ. ಗಾಂಧಿ ಕುಟುಂಬದ ಸಾಮ್ರಾಜ್ಯ ಎಂದ ಮೇಲೆ ಅಲ್ಲಿ ಸಿರಿತನ ಇರಬೇಕಿತ್ತು. ಆದರೆ, ಕೇಸ್ ಉಲ್ಟಾ. ಅದರ ಬಿಸಿಯನ್ನು ಕಳೆದ ಚುನಾವಣೆಯಲ್ಲೇ ರಾಹುಲ್ ಅನುಭವಿಸಿದ್ದರು. ಈ ಬಾರಿ ರಾಜ್ಯ ಬಿಜೆಪಿ ಸರಕಾರ, ಅಮೇಥಿ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಸುರಿಯಲು ಸಿದ್ಧವಾಗಿದೆ. ಅದರ ಮೊದಲ ಹಂತಕ್ಕೆ ಮಂಗಳವಾರ ಚಾಲನೆ ದೊರೆತಿದೆ. ಖುದ್ದು ಅಮಿತ್ ಶಾ ಮತ್ತು ಸ್ಮತಿ ಇರಾನಿ, ಸಿಎಂ ಯೋಗಿ ಆದಿತ್ಯನಾಥ್ ಸಾಲು ಸಾಲು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.

ಅಮೇಥಿಯಲ್ಲಿ ಇನ್ನು ಎಫ್ಎಂ ರೇಡಿಯೋ ಕೇಂದ್ರ, ಸೈನಿಕ ಶಾಲೆ, ಅಮೇಥಿ ಜಿಲ್ಲಾಡಳಿತ ಕೇಂದ್ರ, ಸಿವಿಲ್ ಕೋರ್ಟ್ ಕಟ್ಟಡ, ಕೃಷಿ ವಿಜ್ಞಾನ ಕೇಂದ್ರ, ಐಟಿಐ ಸೇರಿದಂತೆ ಹಲವು ರೈಲ್ವೇ ಯೋಜನೆಗಳು ತಲೆ ಎತ್ತಲಿವೆ. ಇವೆಲ್ಲದಕ್ಕೂ ಮಂಗಳವಾರ ಶಾ ಟೀಂ ಚಾಲನೆ ನೀಡಿದೆ. ಅಷ್ಟೇ ಅಲ್ಲ, ಆರೋಗ್ಯ ಸಂಬಂಧಿ ಮತ್ತು ನೀರಾವರಿ ಸಂಬಂಧಿ ಯೋಜನೆಗಳನ್ನೂ ಉತ್ತರಪ್ರದೇಶ ಅಮೇಥಿಯಲ್ಲಿ ಆರಂಭಿಸಲಿದೆ. ಈ ಮೂಲಕ ಗಾಂಧಿ ಕುಟುಂಬಕ್ಕಿಂತಲೂ ಅಮೇಥಿ ಅಭಿವೃದ್ಧಿ ಬಗ್ಗೆ ಬಿಜೆಪಿಗೆ ಹೆಚ್ಚು ಬದ್ಧತೆ ಇದೆ ಎನ್ನುವುದನ್ನು ಪ್ರೂವ್ ಮಾಡಲು ಬಿಜೆಪಿ ಹೊರಟಿದೆ.

ಜನಸಂಪರ್ಕ
ಇದು ಮೂರನೇ ಅಸ್ತ್ರ. ಇದನ್ನು ಖುದ್ದಾಗಿ ಸ್ಮತಿ ಇರಾನಿಯವರೇ ನಿಭಾಯಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋತರೂ ಧೃತಿಗೆಡದೆ ಗೆದ್ದೇ ಗೆಲ್ಲುವೆ ಒಂದು ದಿನ ಎಂದು ಇರಾನಿ ಓಡಾಡುತ್ತಿದ್ದಾರೆ. 2014ರ ಚುನಾವಣೆ ಬಳಿಕ ಬಹುತೇಕ ಪ್ರತಿತಿಂಗಳೂ ಎರಡು ಮೂರು ದಿನಗಳ ಕಾಲ ಸಚಿವೆ ಇರಾನಿ ಅಮೇಥಿ ಪ್ರವಾಸ ಕೈಗೊಂಡಿದ್ದಾರೆ. ಅಮೇಥಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಸಭೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಪರ ಚುನಾವಣಾ ಕೆಲಸ ಮಾಡುತ್ತಿದ್ದ ಸೈನಿಕರನ್ನೆಲ್ಲಾ ಬಿಜೆಪಿಗೆ ಸೆಳೆಯಲಾರಂಭಿಸಿದ್ದಾರೆ. ಪರಿಣಾಮ ಸೋಮವಾರ ರಾತ್ರಿ 60 ಜನ ದೊಡ್ಡ ನಾಯಕರು ಕಮಲ ಹಿಡಿದಿದ್ದಾರೆ.

ಅಷ್ಟೇ ಅಲ್ಲ, ಖುದ್ದು ಅಮಿತ್ ಶಾ ಮತ್ತು ಬಿಜೆಪಿಯ ಫೈರ್‌ಬ್ರಾಂಡ್ ಲೀಡರ್ ಯೋಗಿ ಆದಿತ್ಯನಾಥ್ ಇನ್ಮುಂದೆ ಸತತವಾಗಿ ಅಮೇಥಿ ಭೇಟಿ ನಡೆಸಲಿದ್ದಾರೆ. ಮಂಗಳವಾರ ದೊಡ್ಡ ಸಾರ್ವಜನಿಕ ಸಮಾವೇಶದ ಮೂಲಕ ಜನಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಸಮಾವೇಶದ ಮುನ್ನಾದಿನ ಕಾಂಗ್ರೆಸ್ ಆಘಾತ ನೀಡಿರುವುದು, ಬಿಜೆಪಿಯ ಸಮರೋತ್ಸಾಹವನ್ನು ಹೆಚ್ಚಿಸಿದೆ. 2014ರಲ್ಲಿ ನೀವು ಕಾಂಗ್ರೆಸ್ ಮುಕ್ತ ಅಮೇಥಿಯ ಭರವಸೆ ನೀಡಿದ್ದೀರಿ, ಅದನ್ನು 2017ರ ವಿಧಾನಸಭಾ ಚುನಾವಣೆಯಲ್ಲಿ ಈಡೇರಿಸಿದ್ದೀರಿ ಎಂದು ಸ್ಮತಿ ಘೋಷಿಸಿದ್ದಾರೆ. ಮುಂದಿನ ಗುರಿ ರಾಹುಲ್ ಮುಕ್ತ ಅಮೇಥಿ ಎಂದು ಪ್ರಕಟಿಸಿದ್ದಾರೆ. ಅದರರ್ಥ ಸ್ಪಷ್ಟ. ಬಿಜೆಪಿ ನಡೆಸುತ್ತಿರುವ ಎಲ್ಲಾ ಸರ್ಕಸ್ ಗಳೂ ರಾಹುಲ್ ವಿರುದ್ಧವೇ ಪ್ರಯೋಗವಾಗಲಿವೆ.

ಮಂಗಳವಾರದ ಸಮಾವೇಶ, ಅಮೇಥಿಯಲ್ಲಿ ತಲ್ಲಣ ಸೃಷ್ಟಿಸಿರುವುದು ಸುಳ್ಳಲ್ಲ. ಈಗ ಹೇಗಿದ್ದರೂ ಕಾಂಗ್ರೆಸ್ ನಾಯಕರೇ ಬಿಜೆಪಿ ಪಾಳಯದಲ್ಲಿದ್ದಾರೆ. ಇನ್ನಷ್ಟು ಮರಿನಾಯಕರನ್ನು, ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುವುದು ಕಷ್ಟದ ಕೆಲಸವಲ್ಲ. ಸರಕಾರವೇ ಬೆನ್ನಿಗೆ ನಿಂತ ಮೇಲೆ ಅದೆಲ್ಲವೂ ಸುಲಭದ ಕೆಲಸ ಎನ್ನುವುದು ರಾಜಕೀಯ ಗೊತ್ತಿರುವವರಿಗೆ ಚೆನ್ನಾಗಿ ಗೊತ್ತಿದೆ. ಆಡಳಿತ ಪಕ್ಷದ ಆಪರೇಷನ್ ಸುಲಭಕ್ಕೆ ಬಲಿಯಾಗುತ್ತಾರೆ ಎನ್ನುವುದಕ್ಕೆ ಕರ್ನಾಟಕದ ಜನ ಕೂಡಾ ಸಾಕ್ಷಿಯಾಗಿದ್ದಾರೆ. ಸ್ಮತಿ ಇರಾನಿ ಮಾತನ್ನೇ ನಂಬುವುದಾದರೆ, ಅಮೇಥಿ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಕಂಪನ ಆರಂಭ ಅಷ್ಟೇ, ಮುಂದೆ ಭೂಕಂಪವೇ ಇದೆಯಂತೆ. ಅಮೇಥಿಯನ್ನು ದತ್ತು ತೆಗೆದುಕೊಂಡಿದ್ದೇವೆ, ಸಂಪೂರ್ಣ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದಿದ್ದಾರೆ ಇರಾನಿ.

ಅಲ್ಲಿಗೆ ಒಂದಂತೂ ಸ್ಪಷ್ಟವಾಗಿದೆ, ಮುಂದಿನ ಚುನಾವಣೆ ರಾಹುಲ್ ಪಾಲಿಗೆ ಕೇಕ್ ವಾಕ್ ಆಗಲಾರದು. ಕಳೆದಬಾರಿಗಿಂತ ಹೆಚ್ಚಿನ ಬೆವರು ಹರಿಸಬೇಕಾದೀತು. ಈ ಮೂಲಕ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವವಹಿಸಲಿರುವ ರಾಹುಲ್ ಗಾಂಧಿಯವರನ್ನು ಅಮೇಥಿಯಲ್ಲೇ ಕಟ್ಟಿಹಾಕುವ ತಂತ್ರವೂ ಶಾ ಟೀಂನದ್ದು. ಒಂದು ವೇಳೆ, ರಾಹುಲ್ ಕ್ಷೇತ್ರ ಬದಲಾಯಿಸಲು ಮುಂದಾದರೆ, ಪ್ರಧಾನಿ ಅಭ್ಯರ್ಥಿಯಾಗಿ ಅವರಿಗೆ ಅದು ಶೋಭೆ ತಾರದು. ಅಲ್ಲೇ ಸ್ಪರ್ಧಿಸಿದರೆ, ಬಲಿಷ್ಟಗೊಳ್ಳುವ ಬಿಜೆಪಿಯನ್ನು ಎದುರಿಸಬೇಕು. ತಮ್ಮ ಕುಟುಂಬದ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದರೆ, ರಾಹುಲ್ ದೇಶದ ಬೇರೆ ಕಡೆಗಳಲ್ಲಿ ಪ್ರಚಾರಕ್ಕೆ ಗಮನ ಕೊಡಲು ಸಾಧ್ಯವಾಗದೇ ಹೋದೀತು. ಅಮಿತ್ ಶಾಗೂ ಇದೇ ಬೇಕಾಗಿರುವುದು. ಬಿಜೆಪಿಯ ಈ ತ್ರಿವಳಿ ಸರ್ಜಿಕಲ್ ಸ್ಟ್ರೈಕ್ ಕಾಂಗ್ರೆಸ್ ಮೊದಲ ಕುಟುಂಬ ಕಂಗಾಲಾಗಿದೆ. ಯಾರು ಗೆಲ್ತಾರೆ ಎನ್ನುವ ಸಸ್ಪೆನ್ಸ್ ಇನ್ನು ಒಂದೂವರೆ ವರ್ಷ ಮುಂದುವರಿಯಲಿದೆ.

ವಿಜಯವಾಣಿ

  • 8.9K
    Shares