ಸ್ಪೂರ್ತಿ

ರಾಜಧಾನಿ ಬೆಂಗಳೂರಿನಲ್ಲಿ “ಕನ್ನಡ ಅನಾಥವಾಗಿದೆ. ಸಾಹಿತಿ ಡಾ ದೊಡ್ಡರಂಗೇಗೌಡ.

ವಿಶ್ವಮುಖಿಯಾಗಿರುವ ಕನ್ನಡ ಭಾಷೆ ರಾಜಧಾನಿ ಬೆಂಗಳೂರಿನಲ್ಲಿ ಅನಾಥವಾಗುತ್ತಿರುವುದು ಆತಂಕದ ವಿಷಯ ಎಂದು ಪದ್ಮಶ್ರೀ ಪುರಸ್ಕøತ ಖ್ಯಾತ ಸಾಹಿತಿ ಡಾ.ದೊಡ್ಡರಂಗೇಗೌಡರು ಹೇಳಿದರು. ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಂಕರ ಮಠದ ವಿವೇಕಾನಂದ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,ಕನ್ನಡ ವಿಶ್ವಮಾನ್ಯಗೊಂಡಿದೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಅದರ ಬಳಕೆ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾಗತೀಕರಣದ ವಿಷಮ ಪರಿಸ್ಥಿತಿಯಲ್ಲಿ ಕನ್ನಡ ಆತಂಕದ ಸ್ಥಿತಿಯಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಭಾಷೆ ಎಲ್ಲಾ ರಂಗಗಳಲ್ಲೂ ಮೆರೆಯಬೇಕಾಗಿದೆ. ವಿಜ್ಞಾನ, ವೈದ್ಯಕೀಯ, ಅರ್ಥಶಾಸ್ತ್ರ, ಖಗೋಳಶಾಸ್ತ್ರ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಸಬೇಕು. ಮೊಬೈಲ್, ಎಸ್‍ಎಂಎಸ್, ಡಿಜಿಟಲ್ ಸೇರಿದಂತೆ ಎಲ್ಲ ರಂಗದಲ್ಲೂ ಕನ್ನಡವನ್ನು ಬಳಸುವ ಮೂಲಕ ನಾವು ಕನ್ನಡತನವನ್ನು ಎತ್ತಿ ಹಿಡಿಯಬೇಕು ಎಂದು ದೊಡ್ಡರಂಗೇಗೌಡರು ಹೇಳಿದರು.
ದ.ರಾ.ಬೇಂದ್ರೆ, ಕುವೆಂಪು ಕನ್ನಡವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ದರು. ನಾವು ನಮ್ಮ ಭಾಷೆಯನ್ನು, ನಮ್ಮ ಸಂಸ್ಕøತಿ ಹಿರಿಮೆ-ಗರಿಮೆಯನ್ನು ಉಳಿಸಿ ಬೆಳೆಸಬೇಕಾದ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ತಿಮ್ಮೇಶ್ ಮಾತನಾಡಿ, ಎಲ್ಲೆಲ್ಲೂ ಕನ್ನಡ ಮೊಳಗಬೇಕು, ಬೆಳಗಬೇಕು ಎಂದು ಹೇಳಿದರು. ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ ಮಾತನಾಡಿ, ಎಲ್ಲರೂ ಒಟ್ಟಾಗಿ ಕನ್ನಡವನ್ನು ಉಳಿಸಿ, ಬೆಳೆಸಬೇಕಾದ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.  ಕನ್ನಡ ಪುಸ್ತಕಗಳು, ಪತ್ರಿಕೆಗಳನ್ನು ಕೊಳ್ಳುವ ಓದುವ ಮೂಲಕ ಕನ್ನಡವನ್ನು ಉಳಿಸಬೇಕೆಂದು ಹೇಳಿದರು.   ಮಹಾಲಕ್ಷ್ಮಿ ಲೇಔಟ್ ಕಸಾಪ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮಾತನಾಡಿ, ಕನ್ನಡದ ಅಳಿವು, ಉಳಿವು ನಮ್ಮ ಕೈಯಲ್ಲೇ ಇದೆ. ನಮ್ಮ ಭಾಷೆ, ಸಂಸ್ಕøತಿಗೆ ತನ್ನದೇ ಆದ ಇತಿಹಾಸವಿದೆ. ನಾವೆಲ್ಲರೂ ಒಟ್ಟಾಗಿ ಅದನ್ನು ಉಳಿಸಿ, ಬೆಳೆಸೋಣ . ಇದಕ್ಕೆ ಪೂರಕವಾಗಿ ಸಾಹಿತ್ಯ ಸಮ್ಮೇಳನ, ನುಡಿಹಬ್ಬ, ಜಾನಪದ ಜಾತ್ರೆ ಇದಕ್ಕೆ ಪೂರಕವಾಗಿದೆ. ಇಂದು ಹಮ್ಮಿಕೊಂಡಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪದ್ಮಶ್ರೀ ಡಾ.ಆರ್.ಎನ್.ತಾರಾನಾಥ್ ರವರು ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಬಿಎಂಪಿ ಸದಸ್ಯ ಭದ್ರೇಗೌಡ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, ಕಾಂಗ್ರೆಸ್ ಮುಖಂಡ ಗಿರೀಶ್ ಕೆ. ನಾಶಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.