ಅದ್ಭುತ

ಪುಸ್ತಕ ಹಿಡಿದು ಕಾಲೇಜ್ ಹೋಗಬೇಕಾದ ವಿದ್ಯಾರ್ಥಿಗಳು ಪುಟ್’ಪಾತ್ ನಲ್ಲಿ ಕಡಲೆ ಮಾರ್ತಾ ಇದ್ರು. ವಿದ್ಯಾರ್ಥಿಗಳ ಈ ಕೆಲಸಕ್ಕೆ ಹರಿದು ಬರುತ್ತಿದೆ ಪ್ರಶಂಸೆಗಳ ಸುರಿಮಳೆ.

ಮನುಷ್ಯನೊಬ್ಬನ ದೈನಂದಿನ ಚಟುವಟಿಕೆಗಳ ವಿಷಯಗಳಲ್ಲಿ ಸ್ಪರ್ಧೆ ಮತ್ತು ಪೈಪೋಟಿ ನಿರಂತರವಾದದ್ದು. ತಮ್ಮ ಹೊಟ್ಟೆಪಾಡಿಗಾಗಿ ಆತ ಆಯ್ದುಕೊಂಡ ಕ್ಷೇತ್ರದಲ್ಲಿ ತನ್ನ ಪ್ರತಿಸ್ಫರ್ಧಿಯಿಂದ ಪೈಪೋಟಿಯನ್ನು ಅನುಭವಿಸುತ್ತಾನೆ.
ಈ ವ್ಯಾವಹಾರಿಕ ಸ್ಫರ್ಧೆ ಎನ್ನುವುದು ಸಗಟು ವ್ಯಾಪಾರಗಳಲ್ಲಿ ಸಕಾರಾತ್ಮಕವಾದ ಫಲಿತಾಂಶವನ್ನು ನೀಡುತ್ತದೆ.

ಒಂದು ಮಾರ್ಜಿನ್ ಮೊತ್ತಕ್ಕೆ, ತನ್ನ ಆರ್ಥಿಕ ದಾರ್ಢ್ಯಕ್ಕೆ ಸಮ್ಮತವಾಗಿ, ಒಂದು ಸಗಟನ್ನು ಖರೀದಿಸಿ , ಅದಕ್ಕೆ ತನ್ನ ಹೊಟ್ಟೆಪಾಡಿಗಾಗುವಷ್ಟು ಲಾಭಾಂಶವನ್ನು ಇಟ್ಟುಕೊಂಡು ತನ್ನ ಮಟ್ಟಿಗೆ ನ್ಯಾಯಯುತವಾಗಿ ಒಂದು ಪ್ರದೇಶದಲ್ಲಿ ವ್ಯಾಪಾರ ನಡೆಸುವಂತಹ ಚಿಲ್ಲರೆ ವ್ಯಾಪಾರಿಗಳಿಗೆ ಮಾರುಕಟ್ಟೆಯ ಸ್ಪರ್ಧೆ ಎನ್ನುವುದು ಸ್ವಲ್ಪಮಟ್ಟಿಗೆ ಅಲ್ಲ ಬಹುಮಟ್ಟಿಗೆ ಹೊಟ್ಟೆಯ ಮೇಲೆ ಹೊಡೆಯುವಂತಹ ಅಂಶವಾಗಿದೆ.

ಎರಡು ಪೊಟ್ಟಣ ವ್ಯಾಪಾರ ಮಾಡುವ ಪುಟ್ಟ ವ್ಯಾಪಾರಿಯನ್ನು ನೀನು ಆ ಜಾಗದಲ್ಲಿ ಕುಳಿತುಕೊಳ್ಳಬಾರದು ಎದ್ದು ಹೋಗು ಎಂದರೆ, ಅವನು ಮತ್ತು ಅವನ ಕುಟುಂಬ ಅಂದಿನ ದಿನ ಅಥವಾ ದುರಾದೃಷ್ಟವಿದ್ದರೆ ಅದೆಷ್ಟು ದಿನ ಊಟವಿಲ್ಲದೆ ಕೊರಗುತ್ತದೆಯೋ ಏನೋ?.

ಇದು ಒಂದು ಕಟ್ಟುಕಥೆಯಂತೆ ಅನ್ನಿಸಿದರೂ ಕೂಡ ಇಂದು ಅಭಿವೃದ್ಧಿಶೀಲ ರಾಷ್ಟ್ರ ಎಂದೆನಿಸಿಕೊಂಡ ಇದೇ ನಮ್ಮ ಭಾರತದ ಬೀದಿಗಳಲ್ಲಿ ನಾವು ದಿನಾಲೂ ಕಣ್ಣುಹಾಯಿಸಿದಾಗ ಕಾಣುವಂತಹ ಸಾಮಾನ್ಯ ವಿಚಾರ.

ಶ್ರೀಸಾಮಾನ್ಯನೊಬ್ಬ ತನ್ನ ಪಾಡಿಗೆ ತನ್ನಲ್ಲೇ ತಾನು ಮಗ್ನನಾಗಿ ಅವರನ್ನು ಹಾದುಕೊಂಡೇ ಸಾಗುವಾಗ ಈ ಸಂಗತಿಗಳ ಸತ್ಯಾಸತ್ಯತೆಯನ್ನು ಅವನು ಗುರುತಿಸಲಾರ.
ಒಮ್ಮೆ ಸ್ವಾರ್ಥಿ ಜಗತ್ತಿನಿಂದ ವಾಸ್ತವ ಜಗತ್ತಿಗೆ ಬಂದು ನೋಡಿದಾಗ ನಮ್ಮ ಸ್ಥಿತಿಯೇನು ಅವರ ಸ್ಥಿತಿಯೇನು ಎಂಬುದು ಅರ್ಥವಾಗುತ್ತದೆ.

ಮಾರುಕಟ್ಟೆಯ ಸ್ಪರ್ಧೆಗಳು ಅಥವಾ ಗ್ರಾಹಕನೊಬ್ಬನ ಅಮಾನವೀಯ ವ್ಯಾವಹಾರಿಕ ಆಯ್ಕೆ ಒಬ್ಬ ಚಿಲ್ಲರೆ ವ್ಯಾಪಾರಿಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಲು ಕಾರಣ ಒಬ್ಬರೇ ಅವರೇ ಕೆನರಾ ಕಾಲೇಜಿನ ದಿಶಾ ಶೆಟ್ಟಿ ಕಟ್ಲ ಹಾಗೂ ಅವರ ಕಣ್ಣಲ್ಲೇ ಕಂಡ ಒಂದು ನಿದರ್ಶನ.

ಅತ್ತಾವರದ ಬೀದಿಯಲ್ಲೊಬ್ಬಳು ವೃದ್ಧ ಮಹಿಳೆ , ಕೌಟುಂಬಿಕವಾಗಿ ಅವರ ಹಿನ್ನೆಲೆ ಗೊತ್ತಿಲ್ಲವಾದರೂ ಆ ಮಹಾತಾಯಿಯನ್ನು ನೋಡಿದವರಿಗೆ ಮಾತ್ರ ಆರ್ಥಿಕವಾಗಿ ಆಕೆಯ ಸ್ಥಿತಿ ಎಷ್ಟು ಕೆಳಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತಿತ್ತು.

ಆ ತಾಯಿ ಎಲ್ಲ ಆಲಸಿಗಳಂತೆ ಭಿಕ್ಷೆ ಬೇಡುತ್ತಿರಲಿಲ್ಲ ಅಥವಾ ಕೈಯಲ್ಲಿ ಹಣ ಹಾಕಿ ಎಂದು ಬೇಡುವ ತಟ್ಟೆ ಇರಲಿಲ್ಲ‌. ಬದಲಾಗಿ
ಆ ತಾಯಿ ಒಂದು-ಎರಡು-ಐದು -ಹತ್ತು ರೂಪಾಯಿಯ ಕಡಲೆ ಪೊಟ್ಟಣಗಳನ್ನು ಜೋಳಿಗೆಯೊಂದಕ್ಕೆ ಸಿಕ್ಕಿಸಿಕೊಂಡು ದಾರಿಹೋಕರಲ್ಲಿ ಕಡಲೆ -ಕಡಲೆ ಎಂದು ಕೂಗುವ ಆ ದ್ರಶ್ಯವು ಹೃದಯ ಇದ್ದವರಿಗೆ ಕಣ್ಣೀರು ತರಿಸುವಂತಿತ್ತು.

ಆ ಮಹಾತಾಯಿಯ ಮುಖದಲ್ಲಿ ವ್ಯಾಪಾರವಾಗಲಿಲ್ಲ ಎನ್ನುವ ಚಿಂತೆ ಇರಲಿಲ್ಲ ಅಥವಾ ಗ್ರಾಹಕ ವ್ಯಾಪಾರಿಯ ಮಟ್ಟವನ್ನು ನೋಡಿ ಖರೀದಿ ಮಾಡುತ್ತಾನೆ ಎನ್ನುವ ಅಸಡ್ಡೆ ಹಾಗೂ ನೋವು ಇರಲಿಲ್ಲ. ಬದಲಾಗಿ, ಇವತ್ತೂ ನನ್ನ ಮರಿ,ಮಕ್ಕಳು ಉಪವಾಸ ಬೀಳುವಂತಾಗುತ್ತಲ್ಲಾ ಅನ್ನುವ ನೋವು ಕಾಣುತ್ತಿತ್ತು.

ಪ್ರತ್ಯಕ್ಷದರ್ಶಿಗಳಾರೂ ಹೃದಯವಿದ್ದವರಂತೆ ಕಾಣಲಿಲ್ಲ ಆದರೆ
ಈ ಸ್ಥಿತಿಯನ್ನು ಕಂಡ ದಿಶಾ ಮನಕರಗಿ ನೇರವಾಗಿ ಹೋಗಿ ಅಜ್ಜಿಯನ್ನು ಕೂರಿಸಿ , ಮಾತಾನಾಡಿಸಿ , ಅವರಲ್ಲಿದ್ದ ಕಡಲೆಯನ್ನು ಖರೀದಿಸಿ , ಅವರ ಯೋಗಕ್ಷೇಮ ವಿಚಾರಿಸಿ ಬಂದರು. ಆ ಅಜ್ಜಿಯ ಸ್ಥಿತಿಯನ್ನು ಕಂಡು ತಮ್ಮಿಂದಾದ ಮಟ್ಟಿಗೆ ಚೇತರಿಕೆ ನೀಡುವಂತಹ ಆಲೋಚನೆಯನ್ನು ಮಾಡಿ , ತನ್ನ ನೇತ್ರತ್ವದಲ್ಲಿ ಹತ್ತು ವಿದ್ಯಾರ್ಥಿಗಳ ತಂಡವನ್ನು ರಚಿಸಿ , ಅವರ ಮೂಲಕ ಒಂದು ಸಾಮಾಜಿಕ ಸೇವೆಗೆ ನಾಂದಿ ಹಾಡುವ ಆದರ್ಶದಿಂದ ‌ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ.

ನಾಲ್ಕು ವಿದ್ಯಾರ್ಥಿನಿಯರು ಹಾಗೂ ನಾಲ್ಕು ವಿದ್ಯಾರ್ಥಿಗಳನ್ನು (ರಮ್ಯ ಕರ್ಕೇರ, ಪೂರ್ಣಿಮಾ, ಜಸೀಮ್,ಪ್ರಥ್ವೀಶ್,ನಿಥೇಶ್,ವೈಶಾಕ್,ಸೌರವ್) ಈ ತಂಡದ ಸದಸ್ಯರನ್ನಾಗಿ ಮಾಡಿದ್ದಾರೆ. ಎಲ್ಲರೂ ಸಮಾನಮನಸ್ಕರಾಗಿದ್ದು,
ವಾಣಿಜ್ಯ ವಿಭಾಗದ ಬಿಬಿಎಂ ವಿದ್ಯಾರ್ಥಿಗಳಾದ ಇವರಲ್ಲಿ ಒಬ್ಬರಾದ ದಿಶಾ ಶೆಟ್ಟಿ ಕಟ್ಲ ಇವರು ಯಕ್ಷಕುವರಿಯೆಂದೇ ಪ್ರಸಿದ್ಧರಾದವರು.
ತನ್ನ ನಾಟ್ಯ ಅಭಿನಯದಿಂದ ಯುವಜನರ ಕಣ್ಮಣಿಯಾಗಿದ್ದಾರೆ. ಯಕ್ಷಗಾನ ರಂಗದಲ್ಲಿ ಮಾತ್ರ ಭಾವವಿಶೇಷಗಳನ್ನು ಮೊಗದಲ್ಲಿ ತೋರಿಸುವಂಥದ್ದಲ್ಲ , ಬದಲಾಗಿ ರಂಗದ ಹೊರಗೂ ಕೂಡ ಭಾವಜೀವಿಗಳಾಗಿರಬೇಕು ಎನ್ನುವ ಇವರ ಆಲೋಚನೆ-ಸಮಾಲೋಚನೆ,
ಮೊದಲ ಯೋಜನೆ -ಯೋಚನೆಗೆ ನಾಂದಿಯಾಗಿ ಆ ತಾಯಿಯ ಪಾಲಿಗೆ ಸರಿಸುಮಾರು ಐದು ದಿನದ ಮಟ್ಟಿಗೆ ಸಾಕಾಗುವಷ್ಟು ವ್ಯಾಪಾರ ಮಾಡಿ ತಮ್ಮ ಸಂಪೂರ್ಣ ಸಮಯವನ್ನು ನೀಡಿ, ಅವರು ಖರೀದಿಸುವ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ, ಅದರಿಂದ ಬಂದ ಮೊತ್ತವನ್ನು ಹಾಗೂ ತಾವು ಸಾಮಾಜಿಕವಾಗಿ ಸ್ವಲ್ಪಮಟ್ಟಿಗೆ ದಾನಿಗಳಿಂದ ಧನಸಹಾಯವನ್ನು ಸಂಗ್ರಹಿಸಿ , ಅದನ್ನು ಆ ವೃದ್ಧೆಗೆ ನೀಡಿ , ಅವರ ಪಾಲಿಗೆ ಸ್ವಲ್ಪದಿನದ ಮಟ್ಟಿಗೆ ವಿಶ್ರಾಂತಿ ನೀಡಿ, ಅವರ ಆರೋಗ್ಯ – ಆರ್ಥಿಕ ಸ್ಥಿತಿಗತಿಗಳನ್ನು ತಮ್ಮಿಂದಾದಷ್ಟು ಮಟ್ಟಿಗೆ ಉತ್ತಮ ಮಟ್ಟಕ್ಕೆ ತರುವ ಸದುದ್ದೇಶದೊಂದಿಗೆ, ಈ ತಂಡ ತಮ್ಮ ಸಹಪಠ್ಯ ಚಟುವಟಿಕೆಯ ಯೋಜನಾ ವಿಷಯವಾಗಿಯೂ ಹಾಗೂ ಸಾಮಾಜಿಕ ಜಾಗೃತಿಯ ಮಾನವೀಯ ದೃಷ್ಟಿಯ ನೆಲೆಯಲ್ಲಿಲ್ಲೂ ಮುಂದುವರೆದಿದ್ದು , ಮುಂದುವರೆಯುತ್ತಿದ್ದು , ಇವರ ಈ ಸಾಮಾಜಿಕ ಕಳಕಳಿಗೆ ಎಲ್ಲರ ಶುಭಶ್ಲಾಘನೆಗಳು ಕೇಳಿಬರುತ್ತಿದೆ.

ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಿದ್ಧಿ ಹೊಂದಿರುವ ಒಬ್ಬ ಹೆಣ್ಣುಮಗಳು ತನ್ನ ಮಾನವೀಯತೆಯಿಂದ ಬಡವರಿಗೆ ಆಸರೆಯಾಗುವಾಗ, ನಾವುಗಳು ಕೂಡ ಕರುಣೆಯ ದೃಷ್ಟಿಯಿಂದ ಸಮಾಜ ಸೇವೆಯಲ್ಲಿ ಪಾಲ್ಗೊಂಡರೆ ಅದು ಒಂದು ಮೆಚ್ಚುಗೆಯ ಕಾರ್ಯವಾಗಬಹುದು.

  • 520
    Shares