ಸುದ್ದಿ ಜಗತ್ತು

ನೆಚ್ಚಿನ ನಾಯಕ ಬರಲಿಲ್ಲ ಅಂತ,ಎರಡು ಬಾರಿ ಮದುವೆ ಮುಂದಕ್ಕೆ ಹಾಕಿದ ಭೂಪ.

ಅಭಿಮಾನದ ಪರಾಕಾಷ್ಠೆಗೆ ಕೊಡಬಹುದಾದ ಉದಾಹರಣೆಯೊಂದರಲ್ಲಿ ಬಿಜೆಪಿ ಸಂಸದ ಶ್ರೀರಾಮುಲು ಅವರ ಭಕ್ತನೊಬ್ಬ, ತನ್ನ ಮದುವೆಗೆ ತಾನು ಮೆಚ್ಚಿದ ನಾಯಕ ಬರಲಿಲ್ಲವೆಂದು ಎರಡು ಬಾರಿ ಮದುವೆಯನ್ನೇ ಕ್ಯಾನ್ಸಲ್ ಮಾಡಿಸಿಕೊಂಡಿದ್ದಾನೆ.

ಇವನ ಅಭಿಮಾನದ ಹುಚ್ಚಾಟಕ್ಕೆ ವಧು ಕುಟುಂಬದ ಪಾಡೇನು ಎನ್ನುವುದು ಕೊಪ್ಪಳದ ಗವಿಸಿದ್ದೇಶ್ವರನೇ ಬಲ್ಲ. ಹೆಬ್ಬುಲಿ ಕುಟುಂಬದ ಮಂಜುನಾಥ್ ಹೆಬ್ಬುಲಿ ಜಿಲ್ಲೆಯ ಗಂಗಾವತಿ ತಾಲೂಕಿನ ವಡಕಿ ಎನ್ನುವ ಗ್ರಾಮದವನು. ಈತ ಶ್ರೀರಾಮುಲು ಅವರ ಪಕ್ಕಾ ಅಭಿಮಾನಿ.

ಮಂಜುನಾಥ್ ಮತ್ತು ಈತನ ಸಹೋದರನ ಮದುವೆಯನ್ನು ಕುಟುಂಬಸ್ಥರು ಅದೇ ಗ್ರಾಮದ ಯುವತಿಯರ ಜೊತೆ ನಿಶ್ಚಯಿಸಿದ್ದರು. ಮದುವೆಯ ದಿನ ಹತ್ತಿರ ಬರುವವರೆಗೂ ಸುಮ್ಮನಿದ್ದ ಮಂಜುನಾಥ್ ಹೆಬ್ಬುಲಿ, ಇದ್ದಕ್ಕಿದ್ದಂತೇ ಶ್ರೀರಾಮುಲು ಮದುವೆಗೆ ಬಂದು ಆಶೀರ್ವಾದ ಮಾಡಿದರೆ ಮಾತ್ರ ತಾಳಿ ಕಟ್ಟುವುದಾಗಿ ಹಠ ಹಿಡಿದಿದ್ದಾನೆ.

ಮಂಜುನಾಥ್ ಎಷ್ಟು ಬುದ್ದಿ ಹೇಳಿದರೂ ಕೇಳದ ನಂತರ, ಕುಟುಂಬಸ್ಥರು ಮತ್ತು ಗ್ರಾಮದ ಹಿರಿಯರು ನೇರವಾಗಿ ಶ್ರೀರಾಮುಲು ಅವರ ಮನೆಗೆ ತೆರಳಿದ್ದಾರೆ. ಆದರೆ, ಶ್ರೀರಾಮುಲು ಅಂದು ಬಳ್ಳಾರಿಯಲ್ಲಿ ಇರಲಿಲ್ಲ. ಹಠ ಬಿಡದ ಇವರುಗಳು, ಸಂಸದರ ಮನೆಯ ಮುಂದೇ ಮಲಗಿಕೊಂಡಿದ್ದಾರೆ.

ಶ್ರೀರಾಮುಲು ಮರುದಿನ ಬಂದ ನಂತರ ಕುಟುಂಬಸ್ಥರು, ಮಂಜುನಾಥ್ ಹೆಬ್ಬುಲಿಗೆ ನಿಮ್ಮ ಮೇಲಿನ ಅಭಿಮಾನದ ಬಗ್ಗೆ ವಿವರಿಸಿದ್ದಾರೆ. ನಿಮ್ಮ ಸಮಯಕ್ಕೆ ಹೊಂದುವಂತೆ ಮದುವೆ ದಿನಾಂಕ ನಿಗದಿ ಪಡಿಸುವುದಾಗಿ ರಾಮುಲು ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಯುವಕನ ಅಭಿಮಾನಕ್ಕೆ ಮನಸೋತ ಶ್ರೀರಾಮುಲು ಮಾರ್ಚ್ ನಾಲ್ಕು, ಭಾನುವಾರದ ಡೇಟ್ ಕೊಟ್ಟಿದ್ದಾರೆ. ಮಂಜುನಾಥ್ ಹೆಬ್ಬುಲಿ ಈ ರೀತಿ ಮದುವೆ ಕ್ಯಾನ್ಸಲ್ ಮಾಡಿಕೊಂಡಿರುವುದು ಎರಡನೇ ಬಾರಿಯಂತೆ.

ಒಟ್ಟಿನಲ್ಲಿ ಮಾರ್ಚ್ ನಾಲ್ಕು, ದಿನ ಸರಿಯಿದೆಯೋ ಇಲ್ಲವೋ, ಶ್ರೀರಾಮುಲು ಬರುತ್ತಿರುವುದರಿಂದ ಮಂಜುನಾಥ್ ಹೆಬ್ಬುಲಿ ಮತ್ತು ಆತನ ಸಹೋದರನಿಗೆ ಅಂದೇ ಶುಭದಿನ..