ಅದ್ಭುತ

ಒಂದೇ ಪಂದ್ಯದಲ್ಲಿ ದಾಖಲೆಯ 1045 ರನ್ ಬಾರಿಸಿದ ಯುವಕ.

ಮಹಾರಾಷ್ಟ್ರದ ಆಟೋ ಚಾಲಕನ ಪುತ್ರ ಪ್ರಣವ್‌ ಧನವಾಡೆ ಎರಡು ವರ್ಷಗಳ ಹಿಂದೆ ವಿಶ್ವ ಕ್ರಿಕೆಟ್‌ ಲೋಕವನ್ನೇ ಬೆರಗುಗೊಳಿಸುವಂತಹ ಕ್ರಿಕೆಟ್‌ ದಾಖಲೆ ನಿರ್ಮಿಸಿದ್ದರು. ಸದ್ಯ ಅವರ ದಾಖಲೆಯನ್ನ ಮತ್ತೊಬ್ಬ ಮುಂಬೈ ಯುವ ಕ್ರಿಕೆಟಿಗ ಉಡೀಸ್‌‌ ಮಾಡಿದ್ದಾರೆ.

ಹೌದು.. ಮುಂಬೈನ 13 ವರ್ಷದ ಬಾಲಕ ತನಿಷ್ಕ್ ಗಾವಟೆ ಮಂಗಳವಾರ ನಡೆದ ಸ್ಥಳೀಯ ಕ್ರಿಕೆಟ್ ಟೂರ್ನಮೆಂಟ್‌‌ನಲ್ಲಿ ರನ್‌‌ಗಳ ಸುರಿಮಳೆಗೈದಿದ್ದಾನೆ. ಅಂಡರ್-14 ನೆವಿ ಮುಂಬೈ ಶೀಲ್ಡ್ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ತನಿಷ್ಕ್ ಔಟಾಗದೇ ಬರೋಬ್ಬರಿ 1,045 ರನ್ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾನೆ.

ಕೊಪರ್‌ ಖೈರೇನ್‌‌ನ ಯಶವಂತ್‌ರಾವ್ ಚವ್ಹಾಣ್‌ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌‌ ಪಂದ್ಯದಲ್ಲಿ ಈ ಹುಡುಗ ಮಾಡಿದ ಸಾಧನೆ ಶಾಲಾ ಕ್ರಿಕೆಟ್‌‌ ಇತಿಹಾಸದಲ್ಲೇ ವಿಶ್ವದಾಖಲೆ ಪುಟ ಸೇರಿದೆ.

ಯಶವಂತ್ ರಾವ್ ಚವ್ಹಾಣ್ ಶಾಲೆಯ ಆಂಗ್ಲ ಮಾಧ್ಯಮ ಟೀಂ ವಿರುದ್ಧ ಸೆಣಸಾಡಿದ ತನಿಷ್ಕ್, 515 ಎಸೆತಗಳಲ್ಲಿ 149 ಬೌಂಡರಿ ಮತ್ತು 67 ಸಿಕ್ಸರ್ ಸಿಡಿಸಿ 1,045 ರನ್ ದಾಖಲಿಸಿದ್ದಾನೆ. ಈ ಮೂಲಕ ಭಂಡಾರಿ ಕಪ್ ಇಂಟರ್‌‌ ಸ್ಕೂಲ್‌ ಟೂರ್ನಮೆಂಟ್‌ನ ಪ್ರಣವ್ ಧನವಾಡೆ ದಾಖಲೆಯನ್ನ ತನಿಷ್ಕ್ ಪುಡಿಗಟ್ಟಿದ್ದಾನೆ. ಪ್ರಣವ್ ಈ ಹಿಂದೆ 1009 ರನ್‌ ಗಳಿಸಿ ವರ್ಲ್ಡ್ ರೆಕಾರ್ಡ್ ಮಾಡಿದ್ದ.