ಅದ್ಭುತ

ಅಶ್ರಫ್ ಇಲ್ಲದೆ ಇದ್ದಿದ್ದರೆ, ಶ್ರೀದೇವಿ ಮೃತದೇಹ,ಇನ್ನೂ ಭಾರತಕ್ಕೆ, ಬರುತ್ತಿರಲಿಲ್ಲ.

ದುಬೈ: ಕಳಿದ ಶನಿವಾರ ತಡರಾತ್ರಿ ಸಾವಿಗೀಡಾದ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ಭಾರತಕ್ಕೆ ರವಾನೆಯಾಗುವಲ್ಲಿ ಭಾರತೀಯ ಮೂಲದ ದುಬೈ ನಿವಾಸಿಯೋರ್ವ ಕಪೂರ್ ಕುಟುಂಬಕ್ಕೆ ನೆರವಾಗಿದ್ದ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ಅಕಾಲಿಕ ಸಾವನ್ನಪ್ಪಿದ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ಇಂದು ಬರುತ್ತದೆ..ನಾಳೆ ಬರುತ್ತದೆ ಎಂದು ಭಾರತೀಯ ಅಭಿಮಾನಿಗಳು ಕಾದು ಕುಳಿತಿದ್ದರೆ ಅತ್ತ ಶ್ರೀದೇವಿ ಅವರ ಕಳೆಬರ ಮಾತ್ರ ದುಬೈನ ಶವಾಗಾರದಲ್ಲೇ ಉಳಿದುಕೊಂಡಿತ್ತು. ಕಾರಣ ಶ್ರೀದೇವಿ ಅವರ ಪಾರ್ಥೀವ ಶರೀರ ಕೊಂಡೊಯ್ಯಲು ಕಪೂರ್ ಕುಟುಂಬಕ್ಕೆ ದುಬೈ ಪೊಲೀಸರಿಂದ ಅಪ್ಪಣೆ ಸಿಕ್ಕರಲಿಲ್ಲ. ಇದಕ್ಕೆ ಬೇಕಾದ ಕಾನೂನು ರೀತ್ಯ ಪ್ರಮಾಣಪತ್ರಗಳನ್ನು ಕಪೂರ್ ಕುಟುಂಬ ದುಬೈ ಪೊಲೀಸರಿಗೆ ಸಲ್ಲಿಕೆ ಮಾಡಿರಲಿಲ್ಲ.

ಆದರೆ ಈ ಹಂತದಲ್ಲಿ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ಭಾರತಕ್ಕೆ ರವಾನೆಯಾಗುವಲ್ಲಿ ನೆರವಾಗಿದ್ದು ಭಾರತೀಯ ಮೂಲದ ಯುಎಇ ನಿವಾಸಿ ಅಶ್ರಫ್ ಶೆರ್ರಿ ಥಮರಸ್ಸರಿ ಎಂಬ 44 ವರ್ಷದ ವ್ಯಕ್ತಿ.. ಭಾರತದ ಕೇರಳ ಮೂಲದ ಅಶ್ರಫ್ ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದು, ಮಧ್ಯಮವರ್ಗದ ಕುಟುಂಬಸ್ಥರಾಗಿದ್ದಾರೆ. ಕೋಟಿ ಕೋಟಿ ಹಣ, ಹೆಸರು, ಪ್ರಭಾವವಿದ್ದರೂ ನಿರ್ಮಾಪಕ ಬೋನಿ ಕಪೂರ್ ಮಾತ್ರ ತಮ್ಮ ಸೂಪರ್ ಸ್ಟಾರ್ ಪತ್ನಿಯ ಶವವನ್ನು ಭಾರತಕ್ಕೆ ರವಾನೆ ಮಾಡುವಲ್ಲಿ ವಿಫಲರಾಗಿದ್ದರು. ಇಂತಹ ಸಂದರ್ಭದಲ್ಲಿ ಬೋನಿ ಕಪೂರ್ ಅವರಿಗೆ ನೆರವಾಗಿದ್ದು ಇದೇ ಅಶ್ರಫ್.

ಹೌದು..ಅಶ್ರಫ್ ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದರೂ ಕ್ರಮೇಣ ದುಬೈನಿಂದ ವಿವಿಧ ದೇಶಗಳಿಗ ಪಾರ್ಥೀವ ಶರೀರ ರವಾನಿಸುವ ಕಾರ್ಯ ಮಾಡಿಕೊಂಡಿದ್ದಾರೆ. ಅಂದರೆ ದುಬೈನ ನಿಯಮಾವಳಿಗಳಂತೆ ಅಲ್ಲಿ ನಿಧನರಾದ ಬೇರೆ ದೇಶದ ನಿವಾಸಿಗಳ ಶವವನ್ನು ದುಬೈ ನಿಯಮಗಳಿಗೆ ಅನುಸಾರ ಪ್ರಮಾಣಪತ್ರಗಳನ್ನು ದಾಖಲೆಗಳನ್ನು ಸಲ್ಲಿಕೆ ಮಾಡಿ ಆಯಾ ದೇಶಕ್ಕೆ ರವಾನೆ ಮಾಡುವುದು. ಅಶ್ರಫ್ ಈವರೆಗೂ ಸುಮಾರು 38 ದೇಶಗಳಿಗೆ ಬರೊಬ್ಬರಿ 4700 ಶವಗಳನ್ನು ರವಾನೆ ಮಾಡಿದ್ದಾರಂತೆ. ದುಬೈ ಮಾತ್ರವಲ್ಲದೇ ಶಾರ್ಜಾ ಅಥವಾ ಯಾವುದೇ ಎಮಿರೇಟ್ಸ್ ರಾಜ್ಯಗಳಲ್ಲಿ ಸಾವನ್ನಪ್ಪುವ ವಿದೇಶಿ ಪ್ರಜೆಗಳ ಶವರವಾನೆಯಾಗಬೇಕಿದ್ದರೆ ಮೊದಲ ಕರೆ ಹೋಗುವುದು ಇದೇ ಅಶ್ರಫ್ ಅವರಿಗಂತೆ..

ಯುಎಇಯ ಕಾನೂನುಗಳನ್ನು ಪೂರ್ಣ ಪ್ರಮಾಣದಲ್ಲಿ ಅರಿತಿರುವ ಅಶ್ರಫ್, ಮೊದ ಮೊದಲು ಇದನ್ನು ಸಮಾಜ ಸೇವಾ ಕಾರ್ಯವಾಗಿ ಸ್ವೀಕರಿಸಿದ್ದರು. ಆದರೆ ಇದೀಗ ಇದೇ ಅವರ ಪರೋಕ್ಷ ವೃತ್ತಿಯಾಗಿ ಹೋಗಿದೆ. ಇವರ ಕಾರ್ಯವನ್ನು ಶ್ಲಾಘಿಸಿ ಹಲವು ದೇಶಗಳಲ್ಲಿ ನೀಡಿರುವ ಶ್ಲಾಘನಾ ಪ್ರಮಾಣಪತ್ರಗಳು, ಪ್ರಶಸ್ತಿಗಳು ಮತ್ತು ಸ್ಮರಣಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಅವರ ನಿವಾಸದಲ್ಲಿದೆ. ಅಷ್ಟು ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿದ್ದ ಅಶ್ರಫ್ ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಕೂಡ ತೋರಿಸಿದ್ದಾರೆ.

ಈ ಬಗ್ಗೆ ಹೆಮ್ಮಿಯಿಂದ ಹೇಳಿಕೊಳ್ಳುವ ಅಶ್ರಫ್, ಈ ಪ್ರಪಂಚದಲ್ಲಿ ಎಲ್ಲರೂ ಒಂದೇ.. ಶ್ರೀಮಂತನಾಗಲೀ ಅಥವಾ ಬಡವನಾಗಲೀ ಸತ್ತಾಗ ಎಲ್ಲರೂ ಒಂದೇ.. ಯಾರಾದರೂ ತಮ್ಮ ಕೊಠಡಿಯವ್ವಿ ಸತ್ತರೆ ಮೊದಲು ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತೇವೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಯುಎಇ ಆಗಲಿ ಅಥವಾ ಶಾರ್ಜಾ ಆಗಲಿ ಅಲ್ಲೂ ಇದೇ ನಿಯಮ.. ನೀವು ಶ್ರೀಮಂತರಾಗಿರಿ ಅಥವಾ ಬಡವರಾಗಿರೂ ಇಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಟಿ ಶ್ರೀದೇವಿ ಸತ್ತ ಬಳಿಕ ಸುಮಾರು ಐದು ವಿದೇಶಿಯರ ಶವರವಾನೆಗೂ ನನಗೆ ಕರೆ ಬಂದಿತ್ತು. ಭಾರತ ಮೂಲದ ಪತ್ರಕರ್ತರು ನನಗೆ ಕರೆ ಮಾಡಿದ್ದರು.

ಬಳಿಕ ನಾನು ದುಬೈ ಶವಾಗಾರಕ್ಕೆ ಆಗಮಿಸಿ ಅಗತ್ಯ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಯಾವ ಯಾವ ಇಲಾಖೆಗಳಿಗೆ ಸಲ್ಲಿಸಬೇಕೋ ಆಯಾ ಇಲಾಖೆಗಳಿಗೆ ಸಲ್ಲಿಕೆ ಮಾಡಿ ಶ್ರೀದೇವಿ ಅವರ ಶವವನ್ನು ಭಾರತಕ್ಕೆ ರವಾನೆ ಮಾಡಿಸಿದೆ. ಇದೇ ರೀತಿ ಇತರೆ ಐದು ಶವಗಳನ್ನೂ ವಿದೇಶಗಳಿಗೆ ರವಾನೆ ಮಾಡುವಲ್ಲಿ ನೆರವು ನೀಡಿದ್ದೇನೆ ಎಂದು ಅಶ್ರಫ್ ಹೇಳಿದ್ದಾರೆ. ದುಬೈನಲ್ಲಿ ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದಿಂದ ಆಗಮಿಸಿರುವ ಲಕ್ಷಾಂತರ ಉದ್ಯೋಗಿಗಳಿದ್ದಾರೆ. ನಾನು ಈ ಕಾರ್ಯವನ್ನು ಹಣಗಳಿಕೆಗಾಗಿ ಅಲ್ಲ ಅವರ ಆಶೀರ್ವಾದಕ್ಕಾಗಿ ಮಾಡುತ್ತಿದ್ದೇನೆ. ಇದರಲ್ಲೇ ನನಗದೆ ತೃಪ್ತಿ ಇದೆ. ಇಲ್ಲಿ ಬೇರೇ ದೇಶದ ನಾಗರೀಕರು ಸಾವನ್ನಪ್ಪಿದರೆ ಅವರ ಕುಟುಂಬಸ್ಥರಿಗೆ ಏನು ಮಾಡುವುದು, ಯಾವ ಪ್ರಮಾಣ ಪತ್ರ, ದಾಖಲೆ ಸಲ್ಲಿಸಬೇಕು ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ಈ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಅಶ್ರಫ್ ಹೇಳಿದ್ದಾರೆ.